ಚರ್ಚಿತ ವ್ಯಂಗ್ಯ ಕಥೆಗಳು
ಹಿಂದಿಯ ವ್ಯಂಗ್ಯ ಸಾಹಿತ್ಯಕ್ಕೆ ಒಂದು ನಿರ್ದಿಷ್ಟ ಆಯಾಮವನ್ನು ಕೊಡುವಲ್ಲಿ ಶ್ರೀ ಜ್ಞಾನ್ ಚತುರ್ವೇದಿಯವರು ಮೊದಲಿಗರು ಎಂದರೆ ಅತಿಶಯೋಕ್ತಿಯಾಗಲಾರದು. ವ್ಯಂಗ್ಯದ ಲಘು-ಹಾಸ್ಯವನ್ನು ಬೇರ್ಪಡಿಸಿ, ವ್ಯಂಗ್ಯವನ್ನು ಒಂದು ಗಂಭೀರ ಬರವಣಿಗೆ ಎಂದು ನಂಬುವ ಶ್ರೀ ಜ್ಞಾನ್ ಚತುರ್ವೇದಿಯವರು ಬೇತಾಳ ಕಥೆಗಳಂತೆ ರೂಪಕ, ದೃಷ್ಟಾಂತ ಮತ್ತು ಫ್ಯಾಂಟಿಸಿಗಳಿಂದ ಸಮಕಾಲೀನ ವಿಸಂಗತಿ ಮತ್ತು ಕುರೂಪತೆಗಳನ್ನು ಯಥಾರ್ಥಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ವ್ಯಂಗ್ಯ ಲೇಖನಗಳಲ್ಲಿ ಚಿತ್ರಿಸುತ್ತಿದ್ದಾರೆ. ಸಾಮಯಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಸಮಾನತೆಗಳನ್ನು ವಿಡಂಬನಾತ್ಮಕವಾಗಿ ಹೊಸ ಶೈಲಿಯೊಂದಿಗೆ ಪ್ರಸ್ತುತ ಪಡಿಸುತ್ತಿರುವ ಇವರು ದಿನ ನಿತ್ಯದ ಘಟನೆಗಳನ್ನು ಬಹು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡುತ್ತಾರೆ. ಇವರ ವ್ಯಂಗ್ಯಗಳು ಓದುಗರಿಗೆ ಒಂದು ಹೊಸ ಚಿಂತನೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತವೆ. ಇವರಿಗೆ ಮಹತ್ವದ ಚಕಲ್ಲಸ್ ಪ್ರಶಸ್ತಿ, ಮಧ್ಯ ಪ್ರದೇಶ್ ಸಾಹಿತ್ಯ ಪರಿಷದ್ ಪ್ರಶಸ್ತಿ, ಉತ್ತರ ಪ್ರದೇಶ್ ಸರ್ಕಾರದ ರಾಷ್ಟ್ರೀಯ ಪುರಸ್ಕಾರ ಮತ್ತು ಅಂತರಾಷ್ಟ್ರೀಯ ಇಂದು ಶರ್ಮಾ[ಲಂಡನ್] ಪ್ರಶಸ್ತಿಗಳು ಲಭಿಸಿವೆ. ತಮ್ಮ ಹದಿನೆಂಟನೇ ವಯಸ್ಸಿಗೆ ಅನುವಾದ ಕ್ಷೇತ್ರಕ್ಕಿಳಿದ ಡಿ.ಎನ್.ಶ್ರೀನಾಥ್ ಹಿಂದಿಯಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಹಿಂದಿಗೆ ಸಾಹಿತ್ಯ ಕೃತಿಗಳನ್ನು ಅನುವಾದಿಸುತ್ತಾ, ಅನುವಾದಕ್ಕೂ ಸೃಜನಶೀಲ ಸ್ಪರ್ಶವನ್ನು ನೀಡುತ್ತಿದ್ದಾರೆ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಇವರು ಅನುವಾದಿಸಿದ ಒಂದು ಸಾವಿರಕ್ಕೂ ಹೆಚ್ಚು ಕಥೆ, ಕವನ, ವ್ಯಂಗ್ಯ ಲೇಖನಗಳು ಪ್ರಕಟಗೊಂಡಿವೆ.ಹದಿನೈದು ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಕನ್ನಡದಿಂದ ಹಿಂದಿಗೆ ಅನುವಾದಗೊಂಡ ಹಲವಾರು ಕಥೆ, ಕವನ ಮತ್ತು ಲೇಖನಗಳು ಹಿಂದಿಯ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ/ಪ್ರಕಟಗೊಳ್ಳಲಿವೆ. ಇವರು ಭಾರತೀಯ ಭಾಷೆಗಳ ಮತ್ತು ವಿದೇಶಿ ಭಾಷೆಗಳ ಅತ್ಯುತ್ತಮ ಕಥೆ, ಕವನ ಮತ್ತು ವ್ಯಂಗ್ಯ ಲೇಖನಗಳನ್ನೂ ಸಹ ಹಿಂದಿ ಮಾಧ್ಯಮದ ಮೂಲಕ ಕನ್ನಡಕ್ಕೆ ಅನುವಾದಿಸುತ್ತಿರುತ್ತಾರೆ. ಇದುವರೆಗೆ ಇವರು ಆರವತ್ತೈದು ಕೃತಿಗಳನ್ನು ಅನುವಾದಿಸಿದ್ದಾರೆ. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ, ಕೇಂದ್ರೀಯ ಹಿಂದಿ ನಿರ್ದೇಶನಾಲಯ, ಮಾನವ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅನುವಾದ ಪ್ರಶಸ್ತಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ, ಕಮಲಾ ಗೋಯಂಕಾ ಪ್ರಶಸ್ತಿಗಳು ಲಭಿಸಿವೆ.
Variants (1)
- Default Title — 170.00 INR — In stock
AI Readiness
Good foundation, but some important product data is still missing.